ಕುನ್‍ಲುನ್

 ಆಗ್ನೇಯ  ಏಷ್ಯದಲ್ಲಿ ವಾಸವಾಗಿದ್ದ, ಕಪ್ಪು ಚರ್ಮ ಮತ್ತು ಗುಂಗುರು ಕೂದಲಿನ ಜನಕ್ಕೆ ಪುರಾತನ ಚೀನೀ ಬರಹಗಳಲ್ಲಿ ಬಳಸಲಾಗಿರುವ ಶಬ್ದ. ಇವರು ಕುನ್‍ಲುನ್ ಪರ್ವತವಾಸಿಗಳಾಗಿದ್ದುದರಿಂದ ಈ ಹೆಸರು ಬಂದಿದೆ. ಈ ಜನ ಆಗ್ನೇಯ ಏಷ್ಯದ ಮೈದಾನ ಪ್ರದೇಶಗಳಲ್ಲಿದ್ದ ಇಂಡೊನೇಷ್ಯನ್ ಜನರೆಂದೇ ಹೇಳಬಹುದು. ಖ್ಮರ್ ಜನರೊಂದಿಗೆ ದೈಹಿಕ ಸಾಮ್ಯಗಳಿದ್ದು ಆಫ್ರಿಕದ ನೀಗ್ರೋಗಳಿಗೂ ಕಾಲಕ್ರಮದಲ್ಲಿ ಈ ಪದವನ್ನುಪಯೋಗಿಸುತ್ತಿದ್ದುದುಂಟು. ಸಮುದ್ರ ತೀರಗಳಲ್ಲಿ ಇವರು ವಾಸವಾಗಿದ್ದುದರಿಂದ ಇವರು ಸಮುದ್ರಯಾನದಲ್ಲಿ ನಿಷ್ಣಾತರಾಗಿದ್ದು ಪೂರ್ವ-ಪಶ್ಚಿಮ ದೇಶಗಳ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ತಮ್ಮ ರಾಜ್ಯದಲ್ಲಿ ಇವರು ಅನೇಕ ರೇವುಪಟ್ಟಣಗಳನ್ನೂ ವ್ಯಾಪಾರ ಕೇಂದ್ರಗಳನ್ನೂ ಸ್ಥಾಪಿಸಿದ್ದರು. ಆದ್ದರಿಂದ ಇವರು ವಿದೇಶೀ ಸಂಸ್ಕøತಿಗಳ, ಮುಖ್ಯವಾಗಿ ಭಾರತೀಯ ಸಂಸ್ಕøತಿಯ, ಸಂಪರ್ಕ ಹೊಂದಿ ಒಳನಾಡು ಪ್ರದೇಶಗಳಿಗೆ ಆ ಸಂಸ್ಕøತಿಯನ್ನು ಒಯ್ದರು. ಮುಂದೆ ಖ್ಮರ್ ಜನ ಭಾರತೀಯ ಸಂಸ್ಕøತಿಯನ್ನು ಅನುಸರಿಸಿದ್ದಕ್ಕೆ ಈ ಸಂಪರ್ಕಗಳೇ ಕಾರಣ. ಕ್ರಿಸ್ತಶಕದ ಆರಂಭದ 3-4 ಶತಮಾನಗಳಲ್ಲಿ ಆಗ್ನೇಯ ಏಷ್ಯದ ಇತಿಹಾಸ ಕುನ್‍ಲುನ್ ಸಂಸ್ಕøತಿಯಿಂದ ಪ್ರಭಾವಿತವಾಗಿ ಬೆಳೆಯಿತೆಂದು ಚೀನೀ ಆಧಾರಗಳು ತಿಳಿಸುತ್ತವೆ.                  

 (ಬಿ.ಕೆ.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ